ಅಪಚಾರ
	
ಧರ್ಮನಿಂದೆ, ದೇವನಿಂದೆ, ಗುರುನಿಂದೆ, ಅಪವಿತ್ರ ವಾಕ್ಪ್ರಯೋಗ ಮುಂತಾದವು (ಬ್ಲಾಸ್‍ಫೆಮಿ). ಪ್ರಾಚೀನ ಗ್ರೀಸ್ ಮತ್ತು ರೋಮ್ ದೇಶಗಳಲ್ಲಿ ಅಪಚಾರವನ್ನು ಒಂದು ಅಪರಾಧವಾಗಿ ಪರಿಗಣಿಸಿದ್ದರು; ಜನರ ದುರ್ಮಾರ್ಗ ಪ್ರವೃತ್ತಿಗೆ ಇದು ಪ್ರೇರಕವೆಂಬ ಕಾರಣದಿಂದ, ಸಾಕ್ರೆಟೀಸನನ್ನು ವಿಚಾರಣೆಗೆ ಗುರಿ ಪಡಿಸಿದ್ದು ಒಂದು ಉದಾಹರಣೆ. ಆದರೆ ಇದೊಂದು ಮಹಾಪಾಪವೆಂಬ ಕಲ್ಪನೆ ಏಕದೇವತಾವಾದವನ್ನು ಎತ್ತಿಹಿಡಿಯುವ ಯಹೂದಿ (ಜ್ಯೂ) ಮತ್ತು ಕ್ರಿಸ್ತಧರ್ಮಗಳ ವೈಶಿಷ್ಟ್ಯವೆನ್ನಬಹುದು. ದೇವದ್ರೋಹಿಗಳಾದ ಪಾಷಂಡಿಗಳಿಗೆ ಅವರು ಮರಣದಂಡನೆಯನ್ನೂ ವಿಧಿಸುತ್ತಿದ್ದರು. ದೇವನಿಂದೆಯಂತೆ, ಧರ್ಮ ಹಾಗೂ ಧಾರ್ಮಿಕ ಸಂಸ್ಥೆಗಳ ದ್ರೋಹವನ್ನೂ ಅಪಚಾರವೆಂದು ಪರಿಗಣಿಸಲಾಗುತ್ತಿತ್ತು. ಮಧ್ಯಯುಗದ ಅನಂತರ ಯೂರೋಪಿನಲ್ಲಿ ಅಪಚಾರವನ್ನು ಪಾತಕವೆನ್ನದಿದ್ದರೂ ಸಮಾಜಘಾತುಕ ಪ್ರವೃತ್ತಿಯೆಂದೇ ತಿಳಿಯುತ್ತ ಬಂದಿದ್ದಾರೆ. ಇಸ್ಲಾಂ ಧರ್ಮದಲ್ಲಿ ಕೂಡ ದೇವನಿಂದೆ ಪಾತಕವೆನಿಸುತ್ತವೆ.
	
ಹಿಂದೂಧರ್ಮದಲ್ಲಿ ಧರ್ಮದ್ರೋಹಿಗೆ ಇಹದಲ್ಲಿ ಧರ್ಮಬಹಿಷ್ಕಾರಾದಿಶಿಕ್ಷೆಗಳೂ, ಪರದಲ್ಲಿ ನರಕಪ್ರಾಪ್ತಿಯೇ ಮುಂತಾದ ದುರ್ಗತಿಗಳೂ ಉಕ್ತವಾಗಿದ್ದರೂ ರಾಜಕೀಯವಾಗಿ ದಂಡನೆ ವಿಧಿಸುತ್ತಿದ್ದಂತೆ ಕಾಣುವುದಿಲ್ಲ. ಅನೇಕ ದೇವತೆಗಳನ್ನೊಪ್ಪುವ ಭಾರತೀಯರಲ್ಲಿ ಪ್ರತಿಯೊಬ್ಬನಿಗೂ ಯಾವುದಾದರೂ ಒಬ್ಬ ದೇವನಲ್ಲಿ ಶ್ರದ್ಧೆ ಇರುತ್ತದಾದ ಕಾರಣ ಯಾರ ಮೇಲೂ ದೈವನಿಂದೆಯ ಕಳಂಕ ಹೊರಿಸುವ ಅಗತ್ಯ ಕಾಣಲಿಲ್ಲ. ವೇದಪುರಾಣಗಳ ಕಾಲಾನಂತರ ಶಿವ, ವಿಷ್ಣು ಮುಂತಾಗಿ ಏಕದೇವವಾದಗಳು ಪ್ರಾಬಲ್ಯಕ್ಕೆ ಬಂದಾಗ ಶೈವ, ವೈಷ್ಣವ, ಮುಂತಾದ ಧರ್ಮಗಳಲ್ಲೂ ಅಪಚಾರವೆಸಗಿದವರ ಜೀವ ತೆಗೆಯಬೇಕೆನ್ನುವವರೆಗೆ ಅಪಚಾರಭಾವನೆ ವಿಕಾಸವಾಗುವುದನ್ನು ಕಾಣಬಹುದು. ಧರ್ಮಕ್ಕಾಗಿ ಕಾದುವುದನ್ನು ಒಪ್ಪುವ ವೀರಶೈವ, ವೀರವೈಷ್ಣವ, ಸಿಖ್ ಮುಂತಾದ ಪಂಥಗಳೂ ಭಾರತದಲ್ಲಿ ಕಡೆಕಡೆಗೆ ಉದಿಸಿದುವಾದರೂ ಅಲ್ಲೆಲ್ಲಿಯೂ ಪಾಶ್ಚಾತ್ಯದೇಶಗಳಂತೆ ಧರ್ಮಾಂಧತೆ ನಮ್ಮ ದೇಶದ ರಾಜಕಾರಣವನ್ನು ಕಪಿಮುಷ್ಟಿಯಲ್ಲಿ ಹಿಡಿಯಲಿಲ್ಲ. ರಾಜಕೀಯವೈರಿಗಳನ್ನು ನಾಶಮಾಡಲು ಅಪಚಾರವನ್ನು ಒಂದು ಅಸ್ತ್ರವನ್ನಾಗಿ ಬಳಸಿದ್ದು ಭಾರತದ ಇತಿಹಾಸದಲ್ಲಿ ತುಂಬ ವಿರಳ.			
(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ